ಈ
ಕಾದಂಬರಿಯು ನೇರವಾಗಿ ಸೀತಾ ಪರಿತ್ಯಾಗದಿಂದ ಪ್ರಾರಂಭವಾಗುತ್ತದೆ. ರಾಮಾಯಣದ ಕುರಿತಂತೆ ಎಷ್ಟೋ ಕೃತಿಗಳು ಬಂದಿದ್ದರೂ, ಅವುಗಳ
ಸ್ಥೂಲ ಪರಿಚಯ ತಮಗಿದ್ದು, ಅವುಗಳ ಸಮಗ್ರ ಅಭ್ಯಾಸ ತಾವು ಮಾಡಿರುವುದಿಲ್ಲವೆಂತಲೂ, “ಉತ್ತರ ಕಾಂಡ”
ವು ತಮ್ಮ ನೇರ ಸೃಜನಶೀಲ ಪ್ರತಿಕ್ರಿಯೆ ಎಂಬುದಾಗಿ ಲೇಖಕರು ಕೃತಿಯಲ್ಲಿಯೇ ಹೇಳಿಬಿಡುತ್ತಾರೆ. ಆದ್ದರಿಂದ, ರಾಮಾಯಣದ ಬಗ್ಗೆ ಅಪಾರ ದೈವೀಕ ಭಾವನೆಯುಳ್ಳವರು
ಈ ಕೃತಿಯನ್ನು ಕವಿ ಕಲ್ಪನೆ ಎಂದು ಪರಿಭಾವಿಸುವುದು ಸಹಜ. ರಾಮಾಯಣದ ಎಲ್ಲ ಪಾತ್ರಗಳನ್ನೂ ಎಲ್ಲಿಯೂ ದೈವಿಕವೆಂದು ಚಿತ್ರಿಸಲಾಗಿಲ್ಲ; ಎಲ್ಲರೂ ಆ ಕಾಲದ
ಇತರೆ ಮನುಷ್ಯರಂತೆ ಮನುಷ್ಯರೆಂದು ಬಿಂಬಿತರಾಗಿದ್ದಾರೆ. ಈ ಪಾತ್ರಗಳನ್ನು ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ನಾವು ಚಿಕ್ಕವರಿದ್ದಾಗ ದೂರದರ್ಶನದಲ್ಲಿ
ಪಂ. ನೆಹರೂರವರ “ಡಿಸ್ಕವರಿ ಆಫ್ ಇಂಡಿಯಾ” ವು ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದು, ಅದರಲ್ಲಿ ರಾಮಾಯಣದ
ಸನ್ನಿವೇಶಗಳು ಹೀಗೆಯೇ ಕಂಡಿದ್ದು, ಬಹುಶಃ ಭೈರಪ್ಪನವರಿಗೆ ಇದು ಒಂದು ಚಿಂತನೆಯನ್ನು ಮೂಡಿಸಿರಬಹುದೆಂದು
ನನ್ನ ಅನಿಸಿಕೆ. ಯಾವ ಪೂರ್ವಾಗ್ರಹಗಳನ್ನೂ ಇರಿಸಿಕೊಳ್ಳದೆ
ಓದಿದಲ್ಲಿ ಚಿಂತನೆಗೆ ಹಚ್ಚಬಹುದಾದ ಕೃತಿ. ಇದರ ಸಾರಾಂಶ
ಹೀಗಿದೆ:
ಈ
ಕೃತಿಯು ರಾಮಾಯಣವನ್ನು ಸೀತೆ ಹೇಗೆ ಕಂಡಿರಬಹುದು ಎಂಬ ಊಹೆಯ ಮೇಲೆ ಕೇಂದ್ರೀಕೃತವಾಗಿದೆ. ಇದರಲ್ಲಿನ ಹಲವಾರು ಘಟನೆಗಳು ನಮ್ಮನ್ನು ತಾರ್ಕಿಕವಾಗಿ ಯೋಚಿಸುವಂತೆ
ಮಾಡುತ್ತವೆ. ದಶರಥನಿಗೆ ತನ್ನ ಮಡದಿಯರಿಂದ ಮಕ್ಕಳಾಗುವುದು ಒಬ್ಬ ವೈದ್ಯನ ಚಿಕಿತ್ಸೆಯಿಂದ. ಕೈಕೇಯಿ ವಿಧಿಸುವ ಷರತ್ತುಗಳು ದಶರಥ ಅವಳನ್ನು ವರಿಸುವ ಮುನ್ನ
ಅವಳ ತಂದೆಗೆ ನೀಡಿದ್ದ ವಾಗ್ದಾನದ ಪ್ರಕಾರ ಸರಿಯೆನಿಸುತ್ತವೆ; ದಶರಥ ನೇರವಾಗಿ ನುಡಿಯದಿದ್ದರೂ ಅವನ
ಮೌನವನ್ನೇ ಸಮ್ಮತಿಯೆಂದು ಭಾವಿಸುವ ರಾಮ; ಲಕ್ಷ್ಮಣನಿಗೆ
ರಾಮನ ಆದರ್ಶವು “ಸ್ವಯಂ ಹಿಂಸೆ ಪಡುವುದು; ತನ್ನ ಅವಲಂಬಿತರೂ ಹಿಂಸೆ ಪಡುವಂತೆ ಮಾಡುವುದು” ಎಂಬುದಾಗಿ
ಚಿತ್ರಿತವಾಗಿದೆ. ಅಹಲ್ಯೆಯ ಶಾಪ ವಿಮೋಚನೆಯ ಪ್ರಸಂಗದಲ್ಲಿ
ಗೌತಮರನ್ನು ರಾಮ ಒಪ್ಪಿಸುವ ರೀತಿ; ಸೀತೆಯನ್ನು ಗೆದ್ದ ನಂತರ ವಿವಾಹವಾಗುವ ಮುನ್ನ ದಶರಥನ ಆಕ್ಷೇಪಗಳಿಗೆ
ರಾಮನ ಉತ್ತರ; ವನವಾಸದ ಆದಿಯಲ್ಲಿ ಗುಹನೊಂದಿಗಿನ ಅವನ ಸ್ನೇಹ. ಶಬರಿಯನ್ನು ರಾಮ ಗೌರವಿಸುವ ರೀತಿ ಅವನಲ್ಲಿ
ಒಬ್ಬ ಪ್ರೌಢ, ಪ್ರಜ್ಞಾವಂತ ನಾಯಕನನ್ನು ಕಾಣಿಸುತ್ತದೆ.
ರಾವಣ ಇಲ್ಲಿ ನೇರವಾಗಿ ಬಂದು ಸೀತೆಯ ಅಪಹರಣವನ್ನು ಮಾಡುವುದಿಲ್ಲ. ಬದಲಿಗೆ ತನ್ನ ಬಂಟರನ್ನು
ಕಳಿಸಿ ಅವಳನ್ನು ಲಂಕೆಯಲ್ಲಿರಿಸುತ್ತಾನೆ. ಇಲ್ಲಿನ
ಹನುಮಂತನಿಗೆ ಒಬ್ಬ ದೇವರು - ಅವನೂ ಹನುಮಂತನೇ. ಸಮುದ್ರೋಲ್ಲಂಘನದ
ಬದಲಿಗೆ ಇಲ್ಲಿನ ಹನುಮಂತನು ಆ ಸಾಗರವನ್ನು ಈಜಿ ಲಂಕೆಗೆ ಬರುತ್ತಾನೆ. ಸೀತೆಯ ಅಗ್ನಿ ಪ್ರವೇಶವನ್ನು ಲಕ್ಷ್ಮಣ ತಡೆಯುತ್ತಾನೆ. ರಾವಣನೊಡನೆ ಕಾಯುವವರೆಗೂ ರಾಮ ನಮಗೆ ಬಹು ಪ್ರಿಯನಾಗುತ್ತಾನೆ. ನಂತರ ಸೀತೆಯ ದೃಷ್ಟಿಯಲ್ಲೂ ರಾಮ ಬೇಡವಾಗುತ್ತಾನೆ. ಶಂಬೂಕನ
ವಧೆಗೂ ಸೀತೆ ಮರುಗುವುದು ಸಹಜವೆನಿಸುತ್ತದೆ. ಲವ ಕುಶರು ರಾಮನಲ್ಲಿಯೇ ಉಳಿಯುತ್ತಾರೆ. ರಾಮನ ಮರಣದ
ನಂತರ ಸೀತೆ ತಾನಾಗಿಯೇ ತನ್ನ ಜಮೀನಿನಲ್ಲಿಯೇ ಮಲಗಿ ಕೊನೆಯಾಗುತ್ತಾಳೆ. ವಾಲ್ಮೀಕಿಗಳು ಉದ್ಗಾರಗೈಯ್ಯುವ “ಕವಿಯು ಏನನ್ನು ತಾನೇ ಬದಲಿಸಬಲ್ಲ?”
ಎಂಬುದು ನಮ್ಮನ್ನು ಕೊರಗಿಗೆ ದೂಡುತ್ತದೆ.