ಇದನ್ನೊಂದು
ಪ್ರಯೋಗಾತ್ಮಕ ಕಾದಂಬರಿ ಎನ್ನಬಹುದು. ಕಥೆಯೊಳಗೊಂದು
ಕಥೆ ಹೇಳುವ ಕೆ.ಟಿ. ಗಟ್ಟಿಯವರ ಶೈಲಿ ಮೊದ ಮೊದಲು ಸ್ವಲ್ಪ ಬೇಜಾರು ತಂದರೂ, ಇಡೀ ಕಾದಂಬರಿಯನ್ನು ಓದಿದಾಗ
ಕಾಮರೂಪಿ ನಿಜವಾಗಲೂ ಇಷ್ಟವಾಗುತ್ತದೆ. ಕಾಮರೂಪಿ ಪ್ರತಿಯೊಬ್ಬರೊಳಗೂ
ಇರುತ್ತಾನೆ ಮತ್ತು ಯಾವ ಸಂದರ್ಭದಲ್ಲಿ ಯಾರ ಮುಂದೆ ಹೇಗೆ ಕಾಣಿಸಿಕೊಳ್ಳಬೇಕು ಎಂದು ಯೋಚಿಸುತ್ತಲೇ
ಇರುತ್ತಾನೆ. ಕೆ.ಟಿ. ಗಟ್ಟಿಯವರೇ ಕಾದಂಬರಿಯಲ್ಲಿ ತಿಳಿಸುವ ಹಾಗೆ, ಕಾಮರೂಪಿ ಅಂದರೆ ಬಯಸಿದ ರೂಪವನ್ನು
ತಾಳಬಲ್ಲವ. ಕಾದಂಬರಿಯಲ್ಲಿ ಬರುವ ರೂಪಶ್ರೀ ಕಥಾನಾಯಕಿ,
ಅವಳು ಸಿನಿಮಾನಟಿಯಾಗಬೇಕೆಂದು ಕನಸು ಕಂಡವಳು, ಹೆಚ್ಚಿನ ಯಶಸ್ಸನ್ನು ಸಾಧಿಸಬೇಕೆನ್ನುವ ಬಯಕೆ ಅವಳದು. ಅದಕ್ಕಾಗಿ ತನ್ನನ್ನು ಗಾಢವಾಗಿ ಪ್ರೀತಿಸುವ ಸಿನಿ ನಟ ಮನುವನ್ನು
ಬಿಟ್ಟು ನಿರ್ದೇಶಕನಾದ ಪ್ರಭುದೇವನನ್ನು ಮದುವೆಯಾಗುತ್ತಾಳೆ; ಪ್ರಭುದೇವನ ಚಿತ್ರವಾದ “ಹಂಸಧ್ವನಿ”
ಒಳ್ಳೆ ಪ್ರತಿಕ್ರಿಯೆ ಪಡೆದರೂ ಚಿತ್ರ ಯಶಸ್ವಿಯಾಗುವುದಿಲ್ಲ. ಅದರಲ್ಲಿನ ನಾಯಕಿ ರೂಪಶ್ರೀ. ಪ್ರಭುದೇವನನ್ನೂ ತೊರೆದು ಸಿನಿರಂಗದವರೇ ಆದ ಪ್ರಮೋದ ಮತ್ತು
ಯೋಗೀಂದ್ರರೊಂದಿಗೆ ಸೇರುತ್ತಾಳೆ. ಪ್ರಮೋದ ನಾಯಕ ನಟ. ರೂಪಶ್ರೀಯನ್ನು ಗಾಢವಾಗಿ ಪ್ರೀತಿಸುವವ. ಅವಳನ್ನೇ ಮದುವೆಯಾಗುವುದೆಂದೆಣಿಸಿದವ; ಅವಳೂ ಒಪ್ಪಿರುತ್ತಾಳೆ. ಪುನಃ ಇಲ್ಲಿಯೂ ರೂಪಶ್ರೀ ಪ್ರಮೋದನನ್ನು ಬಿಟ್ಟು ಯೋಗೀಂದ್ರನ
ಜೊತೆಯಲ್ಲಿರುತ್ತಾಳೆ. ನಂತರ ಅವಳು ಕಾದಂಬರಿಯಲ್ಲಿ ಕಾಣಿಸುವುದು ಖ್ಯಾತ ಕಾದಂಬರಿಕಾರನಾದ ಡಾಕ್ಟರ್
ಚಿದಾನಂದ ಶರ್ಮನ ಜೊತೆಯಲ್ಲಿ.
ಇಡೀ
ಕಾದಂಬರಿ ಗಿರಕಿ ಹೊಡೆಯುವುದು ಈ ಪಾತ್ರಗಳ ಸುತ್ತವಾದರೂ, ಕೆ.ಟಿ. ಗಟ್ಟಿಯವರು ಕಥೆ ಹೇಳುವುದು ಖ್ಯಾತ
ವಾರಪತ್ರಿಕೆ “ನವಜ್ಯೋತಿ”ಯ ರಾಜಾರಾಮ ಹಾರಂಗಿಯೊಡನೆ.
ಈ ಪತ್ರಿಕೆಯಲ್ಲಿ ಧಾರಾವಾಹಿಯೊಂದನ್ನು ಪ್ರಕಟಿಸಲು ಅದ್ಭುತ ಕಾದಂಬರಿಗಳನ್ನು ರಚಿಸಲು ಕಮಲೇಶ,
ಸತ್ಯಮೂರ್ತಿ ಮತ್ತು ಕೋದಂಡರಾವ್ ಎಂಬ ಮೂರು ಖ್ಯಾತ ಕಾದಂಬರಿಕಾರರಿಗೆ ಕೇಳುತ್ತಾನೆ. ಆದರೆ ಈ ಕಾದಂಬರಿಗಳನ್ನು ಒಂದು ತಿಂಗಳೊಳಗೆ ಮುಗಿಸಬೇಕೆಂಬ
ಷರತ್ತನಿಡುತ್ತಾನೆ. ಮೂವರಿಗೂ ಹೋಟೆಲೊಂದನ್ನು ಬುಕ್
ಮಾಡಿಸಿ, ಅಲ್ಲಿಯೇ ಕುಳಿತು ಕಾದಂಬರಿಗಳನ್ನು ಬರೆಯುವಂತೆ ಹೇಳುತ್ತಾನೆ. ಈ ತಿಂಗಳ ಅವಧಿಯಲ್ಲಿ ನಡೆಯುವ ವಿದ್ಯಮಾನಗಳೇ ಕಾಮರೂಪಿಯ
ಕಥಾವಸ್ತು. ಯಾವ ಕಾದಂಬರಿಯನ್ನೂ ಕಾಲಮಿತಿ ಹೇರಿಕೊಂಡು ಬರೆಯಲಾಗುವುದಿಲ್ಲವೆಂಬ ಸತ್ಯದ ಅರಿವಿದ್ದರೂ
ಹಣ, ಹೆಸರಿಗಾಗಿ ಮೂವರೂ ಎಲ್ಲ ಷರತ್ತುಗಳನ್ನೂ ಒಪ್ಪಿಕೊಂಡು ಬರೆಯುತ್ತಾರೆ. ಕೊನೆಯಲ್ಲಿ ಕಾದಂಬರಿಗಳಲ್ಲಿ ಕಂಡು ಬರುವ ಕಥೆ ಒಂದೇ ಆಗಿರುತ್ತದೆ. ರಾಜಾರಾಮ ಹಾರಂಗಿ ತನ್ನ ವ್ಯವಹಾರ ಬುದ್ಧಿಯನ್ನು ಪ್ರದರ್ಶಿಸುತ್ತ
ಈ ಮೂರೂ ಕಾದಂಬರಿಗಳನ್ನೂ ಒಂದೇ ಆಗಿ ಪ್ರಿಂಟ್ ಮಾಡಿಸಿ, ಅದನ್ನು ಧಾರಾವಾಹಿಯಾಗಿ ಪ್ರಕಟಿಸುವ ಇರಾದೆಯನ್ನು
ತಿಳಿಸಿದಾಗ ಕಮಲೇಶ ವಿರೋಧಿಸಿ ಎದ್ದುಹೋಗುತ್ತಾನೆ.
ಸತ್ಯಮೂರ್ತಿ ಮತ್ತು ಕೋದಂಡರಾವಿಗೆ ಚೆಕ್ಕುಗಳನ್ನು ಕೊಟ್ಟು ನಿಸ್ಸಹಾಯಕನಂತೆ ಹಾರಂಗಿ ಹೊರಬಂದಾಗ
ಡಾಕ್ಟರ್ ಚಿದಾನಂದ ಶರ್ಮ ಅವನಿಗೆ ಅದೇ ಹೋಟೆಲಿನಲ್ಲಿ ಸಿಗುತ್ತಾನೆ. ಅವನಿಗೂ ಹಾರಂಗಿ ಒಂದು ತಿಂಗಳಲ್ಲಿ ಕಾದಂಬರಿಯೊಂದನ್ನು ಬರೆಯುವಂತೆ
ಕೇಳಿಕೊಂಡಾಗ ಶರ್ಮ “ಬದುಕಿನ ಹಾಗೆ ಬರಹದಲ್ಲಿ ಸಂಯಮ ಬೇಕಾಗುತ್ತೆ. ಕತೆಯನ್ನು ಎಳೆದೆಳೆದು ರಾಶಿ ಹಾಕೋಕಾಗಲ್ಲ. ಅದು ನಮ್ಮ ಬಳಿಗೆ ಬರ್ಬೇಕು, ನಿಧಾನವಾಗಿ!” ಎನ್ನುತ್ತಾನೆ. ರೂಪಶ್ರೀ ಈಗ ಹಾರಂಗಿಯನ್ನು ನೋಡತೊಡಗುತ್ತಾಳೆ.
No comments:
Post a Comment