Tuesday, April 11, 2017

ಗೃಹಭಂಗ- ಎಸ್.ಎಲ್. ಭೈರಪ್ಪ

ಲೇಖಕರೇ ಹೇಳಿಕೊಳ್ಳುವ ಹಾಗೆ, ಈ ಕಾದಂಬರಿಯು ಜೀವನವನ್ನು ವಸ್ತುನಿಷ್ಠವಾಗಿ ಕಾಣುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡಿದೆ. ನಿಧಾನಗತಿಯಲ್ಲಿ ಸಾಗುವ 1920-40ರ ಕಾಲಘಟ್ಟದ ಕತೆಯಾದರೂ, ನಮ್ಮ ಅಂತಃಕರಣವನ್ನು ಒಮ್ಮೆಯಾದರೂ ತಟ್ಟದಿರುವುದಿಲ್ಲ.  ತಿಪಟೂರು, ಚನ್ನರಾಯಪಟ್ಟಣದ ಗ್ರಾಮಗಳಲ್ಲಿನ ಬದುಕು, ಅಲ್ಲಿನ ಹೋರಾಟ, ಕಥೆ-ವ್ಯಥೆಗಳು ಮನ ಕಲಕುತ್ತವೆ.  ಹುಟ್ಟಿನಿಂದ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳದ ಅಣ್ಣ ತಮ್ಮಂದಿರು ಮತ್ತವರ ತಾಯಿ- ಈ ಮೂರ್ವರೂ ಸೇರಿ ಮನೆಯ ಸೊಸೆಯಂದಿರನ್ನು ಗೋಳುಹೊಯ್ದುಕೊಳ್ಳುವ ಚಿತ್ರಣಗಳು ಹಲವಾರು.  ಇವರ ಕಾಟ ತಡೆಯದೇ ಓಡಿಹೋಗುವ ಎರಡನೆಯ ಸೊಸೆ ಸಾತು ತನ್ನ ಮುಂದಿನ ಜೀವನವನ್ನು ಬೇರೊಬ್ಬರೊಡನೆ ನಡೆಸಿ ಸುಖವಾಗಿರುತ್ತಾಳೆ. 

ಆದರೆ, ಈ ಕಥೆಯ ಕೇಂದ್ರ ಬಿಂದುವಾದ ಮೊದಲ ಸೊಸೆ ನಂಜಮ್ಮಳ ಮನಸ್ಸಿನಲ್ಲಿನ ಗಟ್ಟಿಯಾದ ಛಲ, ಮನೆಯನ್ನು ಉಳಿಸಿಕೊಳ್ಳುವ ಹಂಬಲ ಇವುಗಳು ಕಷ್ಟದಲ್ಲಿರುವ ಹೆಣ್ಣಿಗೆ ಮಾರ್ಗದರ್ಶನವಾದೀತು. ಗೊತ್ತಿದ್ದ ಅಲ್ಪ ವಿದ್ಯೆಯನ್ನೇ ಬಳಸಿಕೊಂಡು ಶಾನುಭೋಗಿಕೆಯನ್ನು ಮಾಡುತ್ತ ಅವಿವೇಕಿ ಗಂಡ ಚೆನ್ನಿಗರಾಯ ಮತ್ತು ಮೈದುನ ಅಪ್ಪಣ್ಣಯರನ್ನು ಹಾಗೂ ರಾಕ್ಷಸಿಯಂತಹ ಅತ್ತೆಯನ್ನು, ಇವರುಗಳಲ್ಲದೆ ಊರಲ್ಲಿನ ತನ್ನ ಶತೃಗಳನ್ನೂ ಸಂಭಾಳಿಸಿಕೊಂಡು ಬರುವ ನಂಜಮ್ಮನಿಗೆ ಮೂರು ಮಕ್ಕಳಾಗುತ್ತವೆ. ಶಾನುಭೋಗಿಕೆ ಹೇಳಿಕೊಡುವ ದ್ಯಾವರಸಯ್ಯ, ಅವಳ ಜೀವನದ ಅಡಿಗಡಿಗೂ ಸಹಾಯಹಸ್ತ ನೀಡುವ ಮಾದೇವಯ್ಯನವರು ಅವಳ ಕಷ್ಟಗಳಿಗೆ ಎರವಾಗುತ್ತಾರೆ. ಆದರೆ, ಯಾವ ಘಟನೆಯೇ ಜರುಗಲಿ, ತನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕುವ ಚೆನ್ನಿಗರಾಯ ಹೊತ್ತು ಹೊತ್ತಿನ ಊಟಕ್ಕೆ, ನಿದ್ದೆಗೆ ಮಾತ್ರ ನಂಜಮ್ಮನನ್ನು ಆಶ್ರಯಿಸುತ್ತಾನೆ.  ಇಡೀ ಕಾದಂಬರಿಯಲ್ಲಿ ಊರಿಗೆ ಹೆಮ್ಮಾರಿಯಂತೆ ಬಂದೆರಗುವ ಪ್ಲೇಗಿನ ವಿವರಣೆ ಈ ರೋಗವನ್ನು ಕೇಳರಿಯದವರಿಗೆ ನಡುಕವನ್ನುಂಟು ಮಾಡುತ್ತದೆ.

ನಂಜಮ್ಮನ ತಮ್ಮ ಕಲ್ಲೇಶನಿಗೆ ಮದುವೆಯಾಗಿದ್ದರೂ ಹೊಂದಿ ಬಾಳಲಾರದ ಹೆಂಡತಿಯೊಡನೆ ಅವನ ಸಿಟ್ಟು, ರೋಷ, ಅವಳನ್ನು ಹೊಡೆಯುವುದರಿಂದಾಗಿ ರೋಸಿ ಹೋದ ನಂಜಮ್ಮನಿಗೆ ತನ್ನ ಪಾಲಿಗೆ ತವರೂ ಸತ್ತುಹೋಯಿತೇ ಎಂಬ ಅನುಮಾನಗಳು ಕಾಡುತ್ತವೆ. ಮನೆಯಲ್ಲಿ ಯಾವಾಗಲೂ ಇರದೇ ಹೊರಗೇ ತಿರುಗಾಡುವ ಅವಳಪ್ಪ ಕಂಠೀಜೋಯಿಸನ ಪಾತ್ರವನ್ನು ಬಲು ಗಟ್ಟಿಯಾಗಿ ಕಟ್ಟಿದ್ದಾರೆ ಭೈರಪ್ಪನವರು. ಹೀಗಾಗಿಯೇ ತನ್ನ ಮಗ, ಸೊಸೆಯನ್ನು ತಹಬದಿಗೆ ತರುವುದು ಅವರಿಗೆ ಸಾಧ್ಯವಾಗುವುದೇ ಇಲ್ಲ.  ಒಂದೊಮ್ಮೆ ಮೊಮ್ಮಗಳಾದ ಪಾರ್ವತಿಯನ್ನೇ ತನ್ನ ಮಗ ಕಲ್ಲೇಶನಿಗೆ ಮದುವೆ ಮಾಡಿಕೊಡು ಎಂದು ನಂಜಮ್ಮನನ್ನು ಕೇಳುತ್ತಾರೆ.  ಚೆನ್ನಿಗರಾಯನಿಗೆ ಮಾವನನ್ನು ಕಂಡರೆ ಭಯ.  ಒಪ್ಪಿಬಿಡುತ್ತಾನೆ.  ಆದರೆ ಕಲ್ಲೇಶನ ಸ್ವಭಾವವನ್ನು ಬಲ್ಲ ನಂಜಮ್ಮ ತನ್ನ ತಂದೆಯನ್ನೂ ಎದುರುಹಾಕಿಕೊಂಡು ಈ ಮದುವೆಗೆ ಒಪ್ಪುವುದಿಲ್ಲ.  ಶಾಲಾ ಮಾಸ್ತರನಾದ ವಿಧುರನಿಗೆ ಪಾರ್ವತಿಯ ಮದುವೆ ನಿಶ್ಚಯ ಮಾಡುತ್ತಾಳೆ.  ಆದರೆ ಊರಿಗೆ ಬಡಿದ ಪ್ಲೇಗಿಗೆ ಪಾರ್ವತಿ ಬಲಿಯಾಗುವುದು, ದೊಡ್ಡ ಮಗ ಬುದ್ಧಿವಂತ ರಾಮಣ್ಣ ಬಲಿಯಾಗುವುದು ನಮ್ಮ ಕರಳನ್ನು ಹಿಂಡುತ್ತದೆ. 

ಕಥೆಯ ಕೊನೆಯಲ್ಲಿ ಎರಡು ಮಕ್ಕಳನ್ನು ಕಳೆದುಕೊಂಡಿದ್ದರೂ, ದಿಟ್ಟೆಯಾಗಿ ಆ ಸಾವುಗಳನ್ನೆದುರಿಸುತ್ತ ಹೊಸ ಮನೆಯೊಂದನ್ನು ನಂಜಮ್ಮ ಕಟ್ಟಿಸುತ್ತಾಳೆ.  ಗೃಹ ಪ್ರವೇಶದ ದಿನವೇ ಮತ್ತೊಮ್ಮೆ ಪ್ಲೇಗು ಊರಿಗೆ ಬಡಿಯುತ್ತದೆ.  ನಂಜಮ್ಮನೂ ಪ್ಲೇಗಿನಿಂದ ಅಸು ನೀಗುತ್ತಾಳೆ. ತಾನು ಕಟ್ಟಿಸಿದ ಮನೆಯಲ್ಲಿರಲಾರದ ಸಂಕಟ, ಮಿಕ್ಕುಳಿದ ಇನ್ನೊಬ್ಬ ಮಗ ವಿಶ್ವನನ್ನು ನೋಡಬೇಕೆನಿಸಿದರೂ, ಮಗ ಬಂದರೆ ಪುನಃ ಅವನೆಲ್ಲಿ ಪ್ಲೇಗಿಗೆ ಬಲಿಯಾಗುತ್ತಾನೋ ಎನ್ನುವ ಅಂಜಿಕೆಯಿಂದಲೇ ಸಾಯುವ ನಂಜಮ್ಮನ ಚಿತ್ರಣ ನಮ್ಮನ್ನು ತಲ್ಲಣಗೊಳಿಸುತ್ತದೆ. ನಂಜಮ್ಮ ಸತ್ತರೂ ನಮ್ಮ ನೆನಪುಗಳಲ್ಲಿ ಬದುಕಿಬಿಡುತ್ತಾಳೆ.

ಶಾನುಭೋಗದ ಲೆಕ್ಕವೇ ಬರದ ಚೆನ್ನಿಗರಾಯ ಮತ್ತ್ತವನ ಅಮ್ಮ, ತಮ್ಮಂದಿರಿಂದ ಇಡೀ ಕುಟುಂಬ ನಾಶವಾಗುವ ಸಂದಿಗ್ಧತೆಯಲ್ಲಿ ನಂಜಮ್ಮ ಬುದ್ಧಿವಂತಿಕೆಯಿಂದ ಶಾನುಭೋಗಿಕೆಯನ್ನೂ ನಿಭಾಯಿಸುತ್ತಾ, ಕುಟುಂಬವನ್ನೂ ನಿರ್ವಹಿಸುವುದು, ಬಡತನವನ್ನು ಎದುರಿಸುವ ರೀತಿಯೂ ಸಹ ಎಂಥವರ ಎದೆಯನ್ನೂ ನಡುಗಿಸಿಬಿಡುತ್ತದೆ. 

ಇಡೀ ಕಾದಂಬರಿಯನ್ನು ಓದಿ ಮುಗಿಸಿದಾಗ ನಂಜಮ್ಮ ತನ್ನ ಮಕ್ಕಳನ್ನು ಕಳೆದುಕೊಂಡು ಪರಿತಪಿಸುವಾಗ ಇಲ್ಲೇ ಎಲ್ಲೋ ನಮ್ಮ ಮಕ್ಕಳನ್ನೇ ಕಳೆದುಕೊಂಡೆವೇನೋ ಎಂಬ ತಳಮಳ ಕಾಡದೇ ಇರದು.  ನಂಜಮ್ಮ ಜೀವ ತೆತ್ತ ಮೇಲೆ ಅವಳ ಬಗ್ಗೆ ಅನುಕಂಪ ಮೂಡಿ ಕಣ್ಣು ಮಂಜಾಗಿ ಒದ್ದೆಯಾಗದೇ ಇರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಅನಿಸಿಕೆ ನನ್ನದು. ಅಲ್ಲದೇ ಅವಳ ಗಂಡ ಚೆನ್ನಿಗರಾಯ ಎದುರಿಗೆ ಸಿಕ್ಕಿದರೆ ಕೈಗೆ ಸಿಕ್ಕದ್ದರಿಂದ ಸಿಕ್ಕಾಪಟ್ಟೆ ಹೊಡೆಯುವಷ್ಟು ಸಿಟ್ಟು ಬರುವುದು ಸಹಜವೇ ಅನಿಸಿಬಿಡುತ್ತಾರೆ ಭೈರಪ್ಪ.  ಗಂಗಮ್ಮ, ಚೆನ್ನಿಗರಾಯ, ಅಪ್ಪಣ್ಣಯ್ಯ ಅಂತಹವರನ್ನೂ ಭೂತಾಯಿ ಹೇಗೆ ಭರಿಸುತ್ತಾಳೋ ಎಂದೆನಿಸದಿರದು.

2003 ರಲ್ಲಿ ಗಿರೀಶ್ ಕಾಸರವಳ್ಳಯವರು ಗೃಹಭಂಗವನ್ನು ಧಾರಾವಾಹಿಯಾಗಿ ನಿರ್ದೇಶಿಸಿದ್ದರು. ಈ ಕಾದಂಬರಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ನವರು ಒಟ್ಟು 14 ಭಾಷೆಗಳಲ್ಲಿ ಪ್ರಕಟಿಸಿದ್ದಾರೆಂದು ವಿಕಿಪೀಡಿಯಾ ತಿಳಿಸುತ್ತದೆ.
 

ಈ ಕಾದಂಬರಿಯ ಮುಂದುವರೆದ ಭಾಗವಾಗಿ ಭೈರಪ್ಪನವರು “ಅನ್ವೇಷಣೆ” ಬರೆದಿದ್ದಾರೆ.  ಅದು ನಂಜಮ್ಮನ ಮಗನಾದ ವಿಶ್ವನ ಜೀವನವನ್ನು ಕುರಿತಂತೆ.  

No comments:

Post a Comment