Monday, April 17, 2017

ಕಾಮರೂಪಿ – ಕೆ.ಟಿ. ಗಟ್ಟಿ

ಇದನ್ನೊಂದು ಪ್ರಯೋಗಾತ್ಮಕ ಕಾದಂಬರಿ ಎನ್ನಬಹುದು.  ಕಥೆಯೊಳಗೊಂದು ಕಥೆ ಹೇಳುವ ಕೆ.ಟಿ. ಗಟ್ಟಿಯವರ ಶೈಲಿ ಮೊದ ಮೊದಲು ಸ್ವಲ್ಪ ಬೇಜಾರು ತಂದರೂ, ಇಡೀ ಕಾದಂಬರಿಯನ್ನು ಓದಿದಾಗ ಕಾಮರೂಪಿ ನಿಜವಾಗಲೂ ಇಷ್ಟವಾಗುತ್ತದೆ.  ಕಾಮರೂಪಿ ಪ್ರತಿಯೊಬ್ಬರೊಳಗೂ ಇರುತ್ತಾನೆ ಮತ್ತು ಯಾವ ಸಂದರ್ಭದಲ್ಲಿ ಯಾರ ಮುಂದೆ ಹೇಗೆ ಕಾಣಿಸಿಕೊಳ್ಳಬೇಕು ಎಂದು ಯೋಚಿಸುತ್ತಲೇ ಇರುತ್ತಾನೆ. ಕೆ.ಟಿ. ಗಟ್ಟಿಯವರೇ ಕಾದಂಬರಿಯಲ್ಲಿ ತಿಳಿಸುವ ಹಾಗೆ, ಕಾಮರೂಪಿ ಅಂದರೆ ಬಯಸಿದ ರೂಪವನ್ನು ತಾಳಬಲ್ಲವ.  ಕಾದಂಬರಿಯಲ್ಲಿ ಬರುವ ರೂಪಶ್ರೀ ಕಥಾನಾಯಕಿ, ಅವಳು ಸಿನಿಮಾನಟಿಯಾಗಬೇಕೆಂದು ಕನಸು ಕಂಡವಳು, ಹೆಚ್ಚಿನ ಯಶಸ್ಸನ್ನು ಸಾಧಿಸಬೇಕೆನ್ನುವ ಬಯಕೆ ಅವಳದು.  ಅದಕ್ಕಾಗಿ ತನ್ನನ್ನು ಗಾಢವಾಗಿ ಪ್ರೀತಿಸುವ ಸಿನಿ ನಟ ಮನುವನ್ನು ಬಿಟ್ಟು ನಿರ್ದೇಶಕನಾದ ಪ್ರಭುದೇವನನ್ನು ಮದುವೆಯಾಗುತ್ತಾಳೆ; ಪ್ರಭುದೇವನ ಚಿತ್ರವಾದ “ಹಂಸಧ್ವನಿ” ಒಳ್ಳೆ ಪ್ರತಿಕ್ರಿಯೆ ಪಡೆದರೂ ಚಿತ್ರ ಯಶಸ್ವಿಯಾಗುವುದಿಲ್ಲ. ಅದರಲ್ಲಿನ ನಾಯಕಿ ರೂಪಶ್ರೀ.  ಪ್ರಭುದೇವನನ್ನೂ ತೊರೆದು ಸಿನಿರಂಗದವರೇ ಆದ ಪ್ರಮೋದ ಮತ್ತು ಯೋಗೀಂದ್ರರೊಂದಿಗೆ ಸೇರುತ್ತಾಳೆ.  ಪ್ರಮೋದ ನಾಯಕ ನಟ.  ರೂಪಶ್ರೀಯನ್ನು ಗಾಢವಾಗಿ ಪ್ರೀತಿಸುವವ.  ಅವಳನ್ನೇ ಮದುವೆಯಾಗುವುದೆಂದೆಣಿಸಿದವ; ಅವಳೂ ಒಪ್ಪಿರುತ್ತಾಳೆ.  ಪುನಃ ಇಲ್ಲಿಯೂ ರೂಪಶ್ರೀ ಪ್ರಮೋದನನ್ನು ಬಿಟ್ಟು ಯೋಗೀಂದ್ರನ ಜೊತೆಯಲ್ಲಿರುತ್ತಾಳೆ. ನಂತರ ಅವಳು ಕಾದಂಬರಿಯಲ್ಲಿ ಕಾಣಿಸುವುದು ಖ್ಯಾತ ಕಾದಂಬರಿಕಾರನಾದ ಡಾಕ್ಟರ್ ಚಿದಾನಂದ ಶರ್ಮನ ಜೊತೆಯಲ್ಲಿ. 


ಇಡೀ ಕಾದಂಬರಿ ಗಿರಕಿ ಹೊಡೆಯುವುದು ಈ ಪಾತ್ರಗಳ ಸುತ್ತವಾದರೂ, ಕೆ.ಟಿ. ಗಟ್ಟಿಯವರು ಕಥೆ ಹೇಳುವುದು ಖ್ಯಾತ ವಾರಪತ್ರಿಕೆ “ನವಜ್ಯೋತಿ”ಯ ರಾಜಾರಾಮ ಹಾರಂಗಿಯೊಡನೆ.  ಈ ಪತ್ರಿಕೆಯಲ್ಲಿ ಧಾರಾವಾಹಿಯೊಂದನ್ನು ಪ್ರಕಟಿಸಲು ಅದ್ಭುತ ಕಾದಂಬರಿಗಳನ್ನು ರಚಿಸಲು ಕಮಲೇಶ, ಸತ್ಯಮೂರ್ತಿ ಮತ್ತು ಕೋದಂಡರಾವ್ ಎಂಬ ಮೂರು ಖ್ಯಾತ ಕಾದಂಬರಿಕಾರರಿಗೆ ಕೇಳುತ್ತಾನೆ.  ಆದರೆ ಈ ಕಾದಂಬರಿಗಳನ್ನು ಒಂದು ತಿಂಗಳೊಳಗೆ ಮುಗಿಸಬೇಕೆಂಬ ಷರತ್ತನಿಡುತ್ತಾನೆ.  ಮೂವರಿಗೂ ಹೋಟೆಲೊಂದನ್ನು ಬುಕ್ ಮಾಡಿಸಿ, ಅಲ್ಲಿಯೇ ಕುಳಿತು ಕಾದಂಬರಿಗಳನ್ನು ಬರೆಯುವಂತೆ ಹೇಳುತ್ತಾನೆ.  ಈ ತಿಂಗಳ ಅವಧಿಯಲ್ಲಿ ನಡೆಯುವ ವಿದ್ಯಮಾನಗಳೇ ಕಾಮರೂಪಿಯ ಕಥಾವಸ್ತು. ಯಾವ ಕಾದಂಬರಿಯನ್ನೂ ಕಾಲಮಿತಿ ಹೇರಿಕೊಂಡು ಬರೆಯಲಾಗುವುದಿಲ್ಲವೆಂಬ ಸತ್ಯದ ಅರಿವಿದ್ದರೂ ಹಣ, ಹೆಸರಿಗಾಗಿ ಮೂವರೂ ಎಲ್ಲ ಷರತ್ತುಗಳನ್ನೂ ಒಪ್ಪಿಕೊಂಡು ಬರೆಯುತ್ತಾರೆ.  ಕೊನೆಯಲ್ಲಿ ಕಾದಂಬರಿಗಳಲ್ಲಿ ಕಂಡು ಬರುವ ಕಥೆ ಒಂದೇ ಆಗಿರುತ್ತದೆ.  ರಾಜಾರಾಮ ಹಾರಂಗಿ ತನ್ನ ವ್ಯವಹಾರ ಬುದ್ಧಿಯನ್ನು ಪ್ರದರ್ಶಿಸುತ್ತ ಈ ಮೂರೂ ಕಾದಂಬರಿಗಳನ್ನೂ ಒಂದೇ ಆಗಿ ಪ್ರಿಂಟ್ ಮಾಡಿಸಿ, ಅದನ್ನು ಧಾರಾವಾಹಿಯಾಗಿ ಪ್ರಕಟಿಸುವ ಇರಾದೆಯನ್ನು ತಿಳಿಸಿದಾಗ ಕಮಲೇಶ ವಿರೋಧಿಸಿ ಎದ್ದುಹೋಗುತ್ತಾನೆ.  ಸತ್ಯಮೂರ್ತಿ ಮತ್ತು ಕೋದಂಡರಾವಿಗೆ ಚೆಕ್ಕುಗಳನ್ನು ಕೊಟ್ಟು ನಿಸ್ಸಹಾಯಕನಂತೆ ಹಾರಂಗಿ ಹೊರಬಂದಾಗ ಡಾಕ್ಟರ್ ಚಿದಾನಂದ ಶರ್ಮ ಅವನಿಗೆ ಅದೇ ಹೋಟೆಲಿನಲ್ಲಿ ಸಿಗುತ್ತಾನೆ.  ಅವನಿಗೂ ಹಾರಂಗಿ ಒಂದು ತಿಂಗಳಲ್ಲಿ ಕಾದಂಬರಿಯೊಂದನ್ನು ಬರೆಯುವಂತೆ ಕೇಳಿಕೊಂಡಾಗ ಶರ್ಮ “ಬದುಕಿನ ಹಾಗೆ ಬರಹದಲ್ಲಿ ಸಂಯಮ ಬೇಕಾಗುತ್ತೆ.  ಕತೆಯನ್ನು ಎಳೆದೆಳೆದು ರಾಶಿ ಹಾಕೋಕಾಗಲ್ಲ.  ಅದು ನಮ್ಮ ಬಳಿಗೆ ಬರ್ಬೇಕು, ನಿಧಾನವಾಗಿ!” ಎನ್ನುತ್ತಾನೆ.  ರೂಪಶ್ರೀ ಈಗ ಹಾರಂಗಿಯನ್ನು ನೋಡತೊಡಗುತ್ತಾಳೆ.  

Tuesday, April 11, 2017

ಕರಿಮಾಯಿ - ಚಂದ್ರಶೇಖರ ಕಂಬಾರ

ಡಾ|| ಚಂದ್ರಶೇಖರ ಕಂಬಾರರ ಅದ್ಭುತ ಕಾದಂಬರಿಗಳಲ್ಲಿ ಒಂದಾದ “ಕರಿಮಾಯಿ” ಶಿವಾಪುರದ ಕಥೆಯನ್ನು ಹೇಳುತ್ತದೆ. ಇಲ್ಲಿ ಕಾಣಬರುವ ಗೌಡ, ದತ್ತಪ್ಪ, ಲಗುಮವ್ವ, ಗುಡಸೀಕರ, ದೇವರೇಸಿ, ನಿಂಗೂ, ಚತುಷ್ಟಯ ಪಾತ್ರಗಳು, ಚಿಮಣಾ, ಬಸವರಾಜು ಇನ್ನಿತರ ಪಾತ್ರಗಳ ನಡೆ ನುಡಿಗಳ ಚಿತ್ರಣ ಇಲ್ಲೇ ನಮ್ಮಗಳ ನಡುವೆಯೇ ಸಿಗಬಹುದಾದ ವ್ಯಕ್ತಿಗಳನ್ನು ಹೋಲುತ್ತವೆ.  “ಹಳೇ ಬೇರು ಹೊಸ ಚಿಗುರು” ಎನ್ನುವ ನುಡಿವಾಕ್ಯವನ್ನು ಸತ್ಯ ಮಾಡಿಸುವಂತೆ ಗೌಡ ಮತ್ತು ದತ್ತಪ್ಪ ಮತ್ತಿತರ ಗ್ರಾಮಸ್ಥರು ಮಾಡುವ ಹೋರಾಟ, ಮುದಿ ತಲೆಗಳ ಬಡಿದು ಯುವ ತಲೆಗಳು ಮೇಲಾಗುವ ಚಿತ್ರಣ ನೀಡುವತ್ತ ಹೊರಡುವ ಗುಡಸೀಕರ, ಬಸವರಾಜು ಮತ್ತು ಇತರ ಚತುಷ್ಟಯರುಗಳ ಪ್ರಯತ್ನ ಇವುಗಳ ನಡುವಿನ ಸಘರ್ಷಗಳನ್ನು ಓದುತ್ತಲೇ, ಇಲ್ಲೇ ಎಲ್ಲೋ ನಡೆಯುವ ರಾಜಕೀಯ ದೊಂಬರಾಟ ಕಣ್ಣಿಗೆ ರಾಚದೇ ಹೋಗದಿರುವುದಿಲ್ಲ.  ಯಾವ ಚುನಾವಣೆಗಳೂ ಇಲ್ಲದೆ, ಗೌಡ ಮತ್ತು ಗ್ರಾಮಸ್ಥರು, ಗುಡಸೀಕರನಿಗೆ “ತಮ್ಮಲ್ಲಿಯ ವಿದ್ಯಾವಂತ” ಎಂಬ ಕಾರಣಕ್ಕಾಗಿ ಊರನ್ನು ಉದ್ಧಾರ ಮಾಡಲಿ ಎಂಬ ಆಸೆಯಿಂದ ಸರಪಂಚನನ್ನಾಗಿ ಮಾಡುತ್ತಾರೆ.  ಮುಂದೆ ಹೇಗೆ ಗುಡಸೀಕರ ಬದಲಾಗುತ್ತಾನೆ, ಊರಿನವರಲ್ಲದ ಚಿಮಣಾ ಮತ್ತು ಬಸವರಾಜರುಗಳೊಡನೆ ಸೇರಿ ಊರಿಗೇ ಉರಿ ಹಚ್ಚುವುದಕ್ಕೆ ಹೇಗೆ ಯತ್ನಿಸುತ್ತಾನೆ ಎಂಬುದೇ ಕಥಾ ಹಂದರ. ಊರ ಜನರಿಗೆ ಪೊಲೀಸರ ಪರಿಚಯಿಸುವ ಗುಡಸೀಕರ, ಜನರಲ್ಲಿ ಭಯ ಮೂಡಿಸುವಲ್ಲಿ ಯಶಸ್ವಿಯಾಗುತ್ತಾನೆ. 
ಊರದೈವ ಕರಿಮಾಯಿಯನ್ನೇ ಮುಂದಿಟ್ಟುಕೊಂಡು ಊರವರಲ್ಲದ ಚಿಮಣಾ ಮತ್ತು ಬಸವರಾಜ ಹೇಗೆ ಗುಡಸೀಕರನೊಂದಿಗೆ ಸೇರಿ ಇಡೀ ಊರಿನ ಚಿತ್ರಣವನ್ನು ಬದಲಾಯಿಸುತ್ತಾರೆ ಎಂಬುದನ್ನು ಓದಿಯೇ ತಿಳಿಯಬೇಕು. ನಮ್ಮವರಲ್ಲದವನನ್ನು ಒಳಗೆ ಬಿಟ್ಟುಕೊಂಡಲ್ಲಿ ಯಾವ ಯಾವ ಅನಾಹುತಗಳಾಗುತ್ತವೆ ಎಂಬುದನ್ನು ಮನೋಜ್ಞವಾಗಿ ತೆರೆದಿಡುತ್ತಾರೆ ಕಂಬಾರರು. 
ಕರಿಮಾಯಿಯ ಬಂಗಾರದ ಮುಖವನ್ನು ಕಳುವು ಮಾಡುವುದಲ್ಲದೇ, ಗುಡಸೀಕರನ ತಂಗಿಯನ್ನೇ ಓಡಿಸಿಕೊಂಡು ಹೋಗುವ ಬಸವರಾಜ ಕೊನೆಗೆ ಗುಡಸೀಕರನ ಕಣ್ಣು ತೆರೆಸುವಲ್ಲಿ ಸಫಲನಾಗುತ್ತಾನೆ. ಗುಡಸೀಕರನ ವಿನಾಕಾರಣ ದ್ವೇಷ ಗೌಡನನ್ನು ಅವನ ಮಗನಾದ ಶಿವನಿಂಗನಿಂದ ಹೇಗೆ ಬೇರೆ ಮಾಡುತ್ತದೆ? ಎಂಬುದು ಅತ್ಯಂತ ಕುತೂಹಲಕಾರಿಯಾಗಿ ಮೂಡಿಬಂದಿದೆ.  ಚಿಮಣಾಳ ಹಾವಭಾವಗಳಿಗೆ ವಶನಾಗಿ ಶಿವನಿಂಗ ಸೋಲುವ ಕ್ಷಣ, ಮುಂದಿನ ಅನಾಹುತಗಳಿಗೆ ಮುನ್ನುಡಿ ಬರೆದಂತಾಗುತ್ತದೆ. 
ಊರಿನ ಮಾಸ್ತರನಿಗೂ ಗೌರವ ನೀಡದ ಗುಡಸೀಕರ ಮತ್ತು ಅವನ ಚತುಷ್ಟಯ ತಂಡ, ಪಂಚಾಯಿತಿ ಚುನಾವಣೆಗೆ ತಯಾರಾಗುವ ಪರಿ ನಮ್ಮನ್ನು ಬೆರಗುಗೊಳಿಸುತ್ತದೆ. ಗೌಡನ ತಂಡ ಊರಿನ ಹಳೆಯ ಪದ್ಧತಿಯಾದ ಕರಿಮಾಯಿಯ ಭಂಡಾರವನ್ನು ಭಕ್ತಿ ಶ್ರದ್ಧೆಗಳಿಂದ ಮತದಾರರಿಗೆ ಹಂಚಿ ಮತ ಬೇಡುವ ಹಾಗೂ ಗುಡಸೀಕರ ಶಹರದಿಂದ ಹೆಣ್ಣುಮಕ್ಕಳಿಗೆ ಬ್ರಾ ತರಿಸಿ ಹಂಚಿ ಮತ ಬೇಡುವ ಚಿತ್ರಣ, ವ್ಯವಸ್ಥೆ ನಿಂತ ನೀರಾಗದೇ ಚಲನೆಯುಳ್ಳದ್ದಾಗಿರಬೇಕೆಂದು ತೋರಿಸಿದರೂ, ಚುನಾವಣೆಗಳು ಸಾಗುತ್ತಿರುವ ರೀತಿಯನ್ನು ನಿಚ್ಚಳವಾಗಿ ತೆರೆದಿಡುತ್ತದೆ. ದೇವರೇಸಿಗೆ ಫಾರಿನ್ ಹೆಂಡದ ರುಚಿ ತೋರಿಸಿ, ಅವನನ್ನು ಗೌಡನ ಕಡೆಯಿಂದ ತಮ್ಮೆಡೆಗೆ ಸೆಳೆದುಕೊಳ್ಳುವ ಗುಡಸೀಕರ ಮತ್ತು ಬಸವರಾಜರುಗಳ ಪ್ರಯತ್ನ ಈಗಿನವರಿಗೆ  ಸಾಮಾನ್ಯವಾಗಿ ತೋರಬಹುದಾದರೂ, ಕಂಬಾರರು ಅದನ್ನು ಬಿಚ್ಚಿಡುವ ರೀತಿ ಅನಾದೃಶ.  ದೇವರೇಸಿ ಹೆಣವಾಗುವ ಮುನ್ನಿನ ಚಡಪಡಿಕೆಗಳು, ಮನಸ್ಸಿನ ತಲ್ಲಣಗಳು ಒಂದು ವಿಲಕ್ಷಣ ಅನುಭೂತಿಯನ್ನು ತೆರೆದಿಡುತ್ತವೆ.  ಕೊನೆಯಲ್ಲಿ ಕರಿಮಾಯಿಯ ಸಾನ್ನಿಧ್ಯದಲ್ಲೇ ಆಗುವ ಕೋಲಾಹಲಗಳಿಂದ ಜರ್ಝರಿತರಾಗುವ ಗೌಡ, ದತ್ತಪ್ಪ, ಲಗುಮವ್ವ, ದೇವರೇಸಿ ಇವರ ಮನಸ್ಸಿನ ಹೊಯಿಕೆಗಳು ಹಳೆಯ ತಲೆಗಳ ತಲ್ಲಣವನ್ನು ಹೊರಸೂಸುತ್ತವೆ. ಕೊನೆಯಲ್ಲಿ ಗುಡಸೀಕರನಿಗೆ ತನ್ನೊಬ್ಬನ ಅಧಿಕಾರದಾಹಕ್ಕಾಗಿ ಇಡೀ ಹಳ್ಳಿಯನ್ನು ಬಲಿಕೊಟ್ಟ ಪಶ್ಚಾತ್ತಾಪ ಕಾಡುವುದು ಮನಸ್ಸಿನ ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ. 

ಓದಿ ಮುಗಿಸಿದ ನಂತರ, ಇಡೀ ಕತೆ ಹಳತು-ಹೊಸತರ ನಡುವಿನ ವಿಚಾರಗಳ ಸಂಘರ್ಷವೆನಿಸುತ್ತದೆ. ಎಷ್ಟೋ ಕತೆಗಳು ಬಂದಿರಬಹುದಾದರೂ, ಕಂಬಾರರ ಕರಿಮಾಯಿ ಓದಿರದ ವಿಚಾರವಂತ ಮುಗ್ಧ ಮನಸ್ಸುಗಳ ಮತ್ತು ಓದಿ ಪ್ರಜ್ಞಾವಂತನೆನಿಸಿದ ವಿಚಾರಹೀನರ ಅಭಿಪ್ರಾಯಗಳ, ಛಲಗಳ ತಾಕಲಾಟವನ್ನು ತೆರೆದಿಡುತ್ತದೆ. ಮರುಓದು ಅವಶ್ಯವೆನಿಸುವಷ್ಟು ಚೆನ್ನಾಗಿದೆ ಕರಿಮಾಯಿ.  ಅಂದಹಾಗೆ, ಕರಿಮಾಯಿ ಕಾದಂಬರಿ ಸಿನಿಮಾ ಆಗಿದೆ.

ಗೃಹಭಂಗ- ಎಸ್.ಎಲ್. ಭೈರಪ್ಪ

ಲೇಖಕರೇ ಹೇಳಿಕೊಳ್ಳುವ ಹಾಗೆ, ಈ ಕಾದಂಬರಿಯು ಜೀವನವನ್ನು ವಸ್ತುನಿಷ್ಠವಾಗಿ ಕಾಣುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡಿದೆ. ನಿಧಾನಗತಿಯಲ್ಲಿ ಸಾಗುವ 1920-40ರ ಕಾಲಘಟ್ಟದ ಕತೆಯಾದರೂ, ನಮ್ಮ ಅಂತಃಕರಣವನ್ನು ಒಮ್ಮೆಯಾದರೂ ತಟ್ಟದಿರುವುದಿಲ್ಲ.  ತಿಪಟೂರು, ಚನ್ನರಾಯಪಟ್ಟಣದ ಗ್ರಾಮಗಳಲ್ಲಿನ ಬದುಕು, ಅಲ್ಲಿನ ಹೋರಾಟ, ಕಥೆ-ವ್ಯಥೆಗಳು ಮನ ಕಲಕುತ್ತವೆ.  ಹುಟ್ಟಿನಿಂದ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳದ ಅಣ್ಣ ತಮ್ಮಂದಿರು ಮತ್ತವರ ತಾಯಿ- ಈ ಮೂರ್ವರೂ ಸೇರಿ ಮನೆಯ ಸೊಸೆಯಂದಿರನ್ನು ಗೋಳುಹೊಯ್ದುಕೊಳ್ಳುವ ಚಿತ್ರಣಗಳು ಹಲವಾರು.  ಇವರ ಕಾಟ ತಡೆಯದೇ ಓಡಿಹೋಗುವ ಎರಡನೆಯ ಸೊಸೆ ಸಾತು ತನ್ನ ಮುಂದಿನ ಜೀವನವನ್ನು ಬೇರೊಬ್ಬರೊಡನೆ ನಡೆಸಿ ಸುಖವಾಗಿರುತ್ತಾಳೆ. 

ಆದರೆ, ಈ ಕಥೆಯ ಕೇಂದ್ರ ಬಿಂದುವಾದ ಮೊದಲ ಸೊಸೆ ನಂಜಮ್ಮಳ ಮನಸ್ಸಿನಲ್ಲಿನ ಗಟ್ಟಿಯಾದ ಛಲ, ಮನೆಯನ್ನು ಉಳಿಸಿಕೊಳ್ಳುವ ಹಂಬಲ ಇವುಗಳು ಕಷ್ಟದಲ್ಲಿರುವ ಹೆಣ್ಣಿಗೆ ಮಾರ್ಗದರ್ಶನವಾದೀತು. ಗೊತ್ತಿದ್ದ ಅಲ್ಪ ವಿದ್ಯೆಯನ್ನೇ ಬಳಸಿಕೊಂಡು ಶಾನುಭೋಗಿಕೆಯನ್ನು ಮಾಡುತ್ತ ಅವಿವೇಕಿ ಗಂಡ ಚೆನ್ನಿಗರಾಯ ಮತ್ತು ಮೈದುನ ಅಪ್ಪಣ್ಣಯರನ್ನು ಹಾಗೂ ರಾಕ್ಷಸಿಯಂತಹ ಅತ್ತೆಯನ್ನು, ಇವರುಗಳಲ್ಲದೆ ಊರಲ್ಲಿನ ತನ್ನ ಶತೃಗಳನ್ನೂ ಸಂಭಾಳಿಸಿಕೊಂಡು ಬರುವ ನಂಜಮ್ಮನಿಗೆ ಮೂರು ಮಕ್ಕಳಾಗುತ್ತವೆ. ಶಾನುಭೋಗಿಕೆ ಹೇಳಿಕೊಡುವ ದ್ಯಾವರಸಯ್ಯ, ಅವಳ ಜೀವನದ ಅಡಿಗಡಿಗೂ ಸಹಾಯಹಸ್ತ ನೀಡುವ ಮಾದೇವಯ್ಯನವರು ಅವಳ ಕಷ್ಟಗಳಿಗೆ ಎರವಾಗುತ್ತಾರೆ. ಆದರೆ, ಯಾವ ಘಟನೆಯೇ ಜರುಗಲಿ, ತನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕುವ ಚೆನ್ನಿಗರಾಯ ಹೊತ್ತು ಹೊತ್ತಿನ ಊಟಕ್ಕೆ, ನಿದ್ದೆಗೆ ಮಾತ್ರ ನಂಜಮ್ಮನನ್ನು ಆಶ್ರಯಿಸುತ್ತಾನೆ.  ಇಡೀ ಕಾದಂಬರಿಯಲ್ಲಿ ಊರಿಗೆ ಹೆಮ್ಮಾರಿಯಂತೆ ಬಂದೆರಗುವ ಪ್ಲೇಗಿನ ವಿವರಣೆ ಈ ರೋಗವನ್ನು ಕೇಳರಿಯದವರಿಗೆ ನಡುಕವನ್ನುಂಟು ಮಾಡುತ್ತದೆ.

ನಂಜಮ್ಮನ ತಮ್ಮ ಕಲ್ಲೇಶನಿಗೆ ಮದುವೆಯಾಗಿದ್ದರೂ ಹೊಂದಿ ಬಾಳಲಾರದ ಹೆಂಡತಿಯೊಡನೆ ಅವನ ಸಿಟ್ಟು, ರೋಷ, ಅವಳನ್ನು ಹೊಡೆಯುವುದರಿಂದಾಗಿ ರೋಸಿ ಹೋದ ನಂಜಮ್ಮನಿಗೆ ತನ್ನ ಪಾಲಿಗೆ ತವರೂ ಸತ್ತುಹೋಯಿತೇ ಎಂಬ ಅನುಮಾನಗಳು ಕಾಡುತ್ತವೆ. ಮನೆಯಲ್ಲಿ ಯಾವಾಗಲೂ ಇರದೇ ಹೊರಗೇ ತಿರುಗಾಡುವ ಅವಳಪ್ಪ ಕಂಠೀಜೋಯಿಸನ ಪಾತ್ರವನ್ನು ಬಲು ಗಟ್ಟಿಯಾಗಿ ಕಟ್ಟಿದ್ದಾರೆ ಭೈರಪ್ಪನವರು. ಹೀಗಾಗಿಯೇ ತನ್ನ ಮಗ, ಸೊಸೆಯನ್ನು ತಹಬದಿಗೆ ತರುವುದು ಅವರಿಗೆ ಸಾಧ್ಯವಾಗುವುದೇ ಇಲ್ಲ.  ಒಂದೊಮ್ಮೆ ಮೊಮ್ಮಗಳಾದ ಪಾರ್ವತಿಯನ್ನೇ ತನ್ನ ಮಗ ಕಲ್ಲೇಶನಿಗೆ ಮದುವೆ ಮಾಡಿಕೊಡು ಎಂದು ನಂಜಮ್ಮನನ್ನು ಕೇಳುತ್ತಾರೆ.  ಚೆನ್ನಿಗರಾಯನಿಗೆ ಮಾವನನ್ನು ಕಂಡರೆ ಭಯ.  ಒಪ್ಪಿಬಿಡುತ್ತಾನೆ.  ಆದರೆ ಕಲ್ಲೇಶನ ಸ್ವಭಾವವನ್ನು ಬಲ್ಲ ನಂಜಮ್ಮ ತನ್ನ ತಂದೆಯನ್ನೂ ಎದುರುಹಾಕಿಕೊಂಡು ಈ ಮದುವೆಗೆ ಒಪ್ಪುವುದಿಲ್ಲ.  ಶಾಲಾ ಮಾಸ್ತರನಾದ ವಿಧುರನಿಗೆ ಪಾರ್ವತಿಯ ಮದುವೆ ನಿಶ್ಚಯ ಮಾಡುತ್ತಾಳೆ.  ಆದರೆ ಊರಿಗೆ ಬಡಿದ ಪ್ಲೇಗಿಗೆ ಪಾರ್ವತಿ ಬಲಿಯಾಗುವುದು, ದೊಡ್ಡ ಮಗ ಬುದ್ಧಿವಂತ ರಾಮಣ್ಣ ಬಲಿಯಾಗುವುದು ನಮ್ಮ ಕರಳನ್ನು ಹಿಂಡುತ್ತದೆ. 

ಕಥೆಯ ಕೊನೆಯಲ್ಲಿ ಎರಡು ಮಕ್ಕಳನ್ನು ಕಳೆದುಕೊಂಡಿದ್ದರೂ, ದಿಟ್ಟೆಯಾಗಿ ಆ ಸಾವುಗಳನ್ನೆದುರಿಸುತ್ತ ಹೊಸ ಮನೆಯೊಂದನ್ನು ನಂಜಮ್ಮ ಕಟ್ಟಿಸುತ್ತಾಳೆ.  ಗೃಹ ಪ್ರವೇಶದ ದಿನವೇ ಮತ್ತೊಮ್ಮೆ ಪ್ಲೇಗು ಊರಿಗೆ ಬಡಿಯುತ್ತದೆ.  ನಂಜಮ್ಮನೂ ಪ್ಲೇಗಿನಿಂದ ಅಸು ನೀಗುತ್ತಾಳೆ. ತಾನು ಕಟ್ಟಿಸಿದ ಮನೆಯಲ್ಲಿರಲಾರದ ಸಂಕಟ, ಮಿಕ್ಕುಳಿದ ಇನ್ನೊಬ್ಬ ಮಗ ವಿಶ್ವನನ್ನು ನೋಡಬೇಕೆನಿಸಿದರೂ, ಮಗ ಬಂದರೆ ಪುನಃ ಅವನೆಲ್ಲಿ ಪ್ಲೇಗಿಗೆ ಬಲಿಯಾಗುತ್ತಾನೋ ಎನ್ನುವ ಅಂಜಿಕೆಯಿಂದಲೇ ಸಾಯುವ ನಂಜಮ್ಮನ ಚಿತ್ರಣ ನಮ್ಮನ್ನು ತಲ್ಲಣಗೊಳಿಸುತ್ತದೆ. ನಂಜಮ್ಮ ಸತ್ತರೂ ನಮ್ಮ ನೆನಪುಗಳಲ್ಲಿ ಬದುಕಿಬಿಡುತ್ತಾಳೆ.

ಶಾನುಭೋಗದ ಲೆಕ್ಕವೇ ಬರದ ಚೆನ್ನಿಗರಾಯ ಮತ್ತ್ತವನ ಅಮ್ಮ, ತಮ್ಮಂದಿರಿಂದ ಇಡೀ ಕುಟುಂಬ ನಾಶವಾಗುವ ಸಂದಿಗ್ಧತೆಯಲ್ಲಿ ನಂಜಮ್ಮ ಬುದ್ಧಿವಂತಿಕೆಯಿಂದ ಶಾನುಭೋಗಿಕೆಯನ್ನೂ ನಿಭಾಯಿಸುತ್ತಾ, ಕುಟುಂಬವನ್ನೂ ನಿರ್ವಹಿಸುವುದು, ಬಡತನವನ್ನು ಎದುರಿಸುವ ರೀತಿಯೂ ಸಹ ಎಂಥವರ ಎದೆಯನ್ನೂ ನಡುಗಿಸಿಬಿಡುತ್ತದೆ. 

ಇಡೀ ಕಾದಂಬರಿಯನ್ನು ಓದಿ ಮುಗಿಸಿದಾಗ ನಂಜಮ್ಮ ತನ್ನ ಮಕ್ಕಳನ್ನು ಕಳೆದುಕೊಂಡು ಪರಿತಪಿಸುವಾಗ ಇಲ್ಲೇ ಎಲ್ಲೋ ನಮ್ಮ ಮಕ್ಕಳನ್ನೇ ಕಳೆದುಕೊಂಡೆವೇನೋ ಎಂಬ ತಳಮಳ ಕಾಡದೇ ಇರದು.  ನಂಜಮ್ಮ ಜೀವ ತೆತ್ತ ಮೇಲೆ ಅವಳ ಬಗ್ಗೆ ಅನುಕಂಪ ಮೂಡಿ ಕಣ್ಣು ಮಂಜಾಗಿ ಒದ್ದೆಯಾಗದೇ ಇರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಅನಿಸಿಕೆ ನನ್ನದು. ಅಲ್ಲದೇ ಅವಳ ಗಂಡ ಚೆನ್ನಿಗರಾಯ ಎದುರಿಗೆ ಸಿಕ್ಕಿದರೆ ಕೈಗೆ ಸಿಕ್ಕದ್ದರಿಂದ ಸಿಕ್ಕಾಪಟ್ಟೆ ಹೊಡೆಯುವಷ್ಟು ಸಿಟ್ಟು ಬರುವುದು ಸಹಜವೇ ಅನಿಸಿಬಿಡುತ್ತಾರೆ ಭೈರಪ್ಪ.  ಗಂಗಮ್ಮ, ಚೆನ್ನಿಗರಾಯ, ಅಪ್ಪಣ್ಣಯ್ಯ ಅಂತಹವರನ್ನೂ ಭೂತಾಯಿ ಹೇಗೆ ಭರಿಸುತ್ತಾಳೋ ಎಂದೆನಿಸದಿರದು.

2003 ರಲ್ಲಿ ಗಿರೀಶ್ ಕಾಸರವಳ್ಳಯವರು ಗೃಹಭಂಗವನ್ನು ಧಾರಾವಾಹಿಯಾಗಿ ನಿರ್ದೇಶಿಸಿದ್ದರು. ಈ ಕಾದಂಬರಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ನವರು ಒಟ್ಟು 14 ಭಾಷೆಗಳಲ್ಲಿ ಪ್ರಕಟಿಸಿದ್ದಾರೆಂದು ವಿಕಿಪೀಡಿಯಾ ತಿಳಿಸುತ್ತದೆ.
 

ಈ ಕಾದಂಬರಿಯ ಮುಂದುವರೆದ ಭಾಗವಾಗಿ ಭೈರಪ್ಪನವರು “ಅನ್ವೇಷಣೆ” ಬರೆದಿದ್ದಾರೆ.  ಅದು ನಂಜಮ್ಮನ ಮಗನಾದ ವಿಶ್ವನ ಜೀವನವನ್ನು ಕುರಿತಂತೆ.