ಡಾ|| ಚಂದ್ರಶೇಖರ ಕಂಬಾರರ ಅದ್ಭುತ ಕಾದಂಬರಿಗಳಲ್ಲಿ
ಒಂದಾದ “ಕರಿಮಾಯಿ” ಶಿವಾಪುರದ ಕಥೆಯನ್ನು ಹೇಳುತ್ತದೆ. ಇಲ್ಲಿ ಕಾಣಬರುವ ಗೌಡ, ದತ್ತಪ್ಪ, ಲಗುಮವ್ವ,
ಗುಡಸೀಕರ, ದೇವರೇಸಿ, ನಿಂಗೂ, ಚತುಷ್ಟಯ ಪಾತ್ರಗಳು, ಚಿಮಣಾ, ಬಸವರಾಜು ಇನ್ನಿತರ ಪಾತ್ರಗಳ ನಡೆ ನುಡಿಗಳ
ಚಿತ್ರಣ ಇಲ್ಲೇ ನಮ್ಮಗಳ ನಡುವೆಯೇ ಸಿಗಬಹುದಾದ ವ್ಯಕ್ತಿಗಳನ್ನು ಹೋಲುತ್ತವೆ. “ಹಳೇ ಬೇರು ಹೊಸ ಚಿಗುರು” ಎನ್ನುವ ನುಡಿವಾಕ್ಯವನ್ನು ಸತ್ಯ
ಮಾಡಿಸುವಂತೆ ಗೌಡ ಮತ್ತು ದತ್ತಪ್ಪ ಮತ್ತಿತರ ಗ್ರಾಮಸ್ಥರು ಮಾಡುವ ಹೋರಾಟ, ಮುದಿ ತಲೆಗಳ ಬಡಿದು ಯುವ
ತಲೆಗಳು ಮೇಲಾಗುವ ಚಿತ್ರಣ ನೀಡುವತ್ತ ಹೊರಡುವ ಗುಡಸೀಕರ, ಬಸವರಾಜು ಮತ್ತು ಇತರ ಚತುಷ್ಟಯರುಗಳ ಪ್ರಯತ್ನ
ಇವುಗಳ ನಡುವಿನ ಸಘರ್ಷಗಳನ್ನು ಓದುತ್ತಲೇ, ಇಲ್ಲೇ ಎಲ್ಲೋ ನಡೆಯುವ ರಾಜಕೀಯ ದೊಂಬರಾಟ ಕಣ್ಣಿಗೆ ರಾಚದೇ
ಹೋಗದಿರುವುದಿಲ್ಲ. ಯಾವ ಚುನಾವಣೆಗಳೂ ಇಲ್ಲದೆ, ಗೌಡ
ಮತ್ತು ಗ್ರಾಮಸ್ಥರು, ಗುಡಸೀಕರನಿಗೆ “ತಮ್ಮಲ್ಲಿಯ ವಿದ್ಯಾವಂತ” ಎಂಬ ಕಾರಣಕ್ಕಾಗಿ ಊರನ್ನು ಉದ್ಧಾರ
ಮಾಡಲಿ ಎಂಬ ಆಸೆಯಿಂದ ಸರಪಂಚನನ್ನಾಗಿ ಮಾಡುತ್ತಾರೆ.
ಮುಂದೆ ಹೇಗೆ ಗುಡಸೀಕರ ಬದಲಾಗುತ್ತಾನೆ, ಊರಿನವರಲ್ಲದ ಚಿಮಣಾ ಮತ್ತು ಬಸವರಾಜರುಗಳೊಡನೆ ಸೇರಿ
ಊರಿಗೇ ಉರಿ ಹಚ್ಚುವುದಕ್ಕೆ ಹೇಗೆ ಯತ್ನಿಸುತ್ತಾನೆ ಎಂಬುದೇ ಕಥಾ ಹಂದರ. ಊರ ಜನರಿಗೆ ಪೊಲೀಸರ ಪರಿಚಯಿಸುವ
ಗುಡಸೀಕರ, ಜನರಲ್ಲಿ ಭಯ ಮೂಡಿಸುವಲ್ಲಿ ಯಶಸ್ವಿಯಾಗುತ್ತಾನೆ.
ಊರದೈವ ಕರಿಮಾಯಿಯನ್ನೇ ಮುಂದಿಟ್ಟುಕೊಂಡು ಊರವರಲ್ಲದ
ಚಿಮಣಾ ಮತ್ತು ಬಸವರಾಜ ಹೇಗೆ ಗುಡಸೀಕರನೊಂದಿಗೆ ಸೇರಿ ಇಡೀ ಊರಿನ ಚಿತ್ರಣವನ್ನು ಬದಲಾಯಿಸುತ್ತಾರೆ
ಎಂಬುದನ್ನು ಓದಿಯೇ ತಿಳಿಯಬೇಕು. ನಮ್ಮವರಲ್ಲದವನನ್ನು ಒಳಗೆ ಬಿಟ್ಟುಕೊಂಡಲ್ಲಿ ಯಾವ ಯಾವ ಅನಾಹುತಗಳಾಗುತ್ತವೆ
ಎಂಬುದನ್ನು ಮನೋಜ್ಞವಾಗಿ ತೆರೆದಿಡುತ್ತಾರೆ ಕಂಬಾರರು.
ಕರಿಮಾಯಿಯ ಬಂಗಾರದ ಮುಖವನ್ನು ಕಳುವು ಮಾಡುವುದಲ್ಲದೇ,
ಗುಡಸೀಕರನ ತಂಗಿಯನ್ನೇ ಓಡಿಸಿಕೊಂಡು ಹೋಗುವ ಬಸವರಾಜ ಕೊನೆಗೆ ಗುಡಸೀಕರನ ಕಣ್ಣು ತೆರೆಸುವಲ್ಲಿ ಸಫಲನಾಗುತ್ತಾನೆ.
ಗುಡಸೀಕರನ ವಿನಾಕಾರಣ ದ್ವೇಷ ಗೌಡನನ್ನು ಅವನ ಮಗನಾದ ಶಿವನಿಂಗನಿಂದ ಹೇಗೆ ಬೇರೆ ಮಾಡುತ್ತದೆ? ಎಂಬುದು
ಅತ್ಯಂತ ಕುತೂಹಲಕಾರಿಯಾಗಿ ಮೂಡಿಬಂದಿದೆ. ಚಿಮಣಾಳ
ಹಾವಭಾವಗಳಿಗೆ ವಶನಾಗಿ ಶಿವನಿಂಗ ಸೋಲುವ ಕ್ಷಣ, ಮುಂದಿನ ಅನಾಹುತಗಳಿಗೆ ಮುನ್ನುಡಿ ಬರೆದಂತಾಗುತ್ತದೆ.
ಊರಿನ ಮಾಸ್ತರನಿಗೂ ಗೌರವ ನೀಡದ ಗುಡಸೀಕರ ಮತ್ತು
ಅವನ ಚತುಷ್ಟಯ ತಂಡ, ಪಂಚಾಯಿತಿ ಚುನಾವಣೆಗೆ ತಯಾರಾಗುವ ಪರಿ ನಮ್ಮನ್ನು ಬೆರಗುಗೊಳಿಸುತ್ತದೆ. ಗೌಡನ
ತಂಡ ಊರಿನ ಹಳೆಯ ಪದ್ಧತಿಯಾದ ಕರಿಮಾಯಿಯ ಭಂಡಾರವನ್ನು ಭಕ್ತಿ ಶ್ರದ್ಧೆಗಳಿಂದ ಮತದಾರರಿಗೆ ಹಂಚಿ ಮತ
ಬೇಡುವ ಹಾಗೂ ಗುಡಸೀಕರ ಶಹರದಿಂದ ಹೆಣ್ಣುಮಕ್ಕಳಿಗೆ ಬ್ರಾ ತರಿಸಿ ಹಂಚಿ ಮತ ಬೇಡುವ ಚಿತ್ರಣ, ವ್ಯವಸ್ಥೆ
ನಿಂತ ನೀರಾಗದೇ ಚಲನೆಯುಳ್ಳದ್ದಾಗಿರಬೇಕೆಂದು ತೋರಿಸಿದರೂ, ಚುನಾವಣೆಗಳು ಸಾಗುತ್ತಿರುವ ರೀತಿಯನ್ನು
ನಿಚ್ಚಳವಾಗಿ ತೆರೆದಿಡುತ್ತದೆ. ದೇವರೇಸಿಗೆ ಫಾರಿನ್ ಹೆಂಡದ ರುಚಿ ತೋರಿಸಿ, ಅವನನ್ನು ಗೌಡನ ಕಡೆಯಿಂದ
ತಮ್ಮೆಡೆಗೆ ಸೆಳೆದುಕೊಳ್ಳುವ ಗುಡಸೀಕರ ಮತ್ತು ಬಸವರಾಜರುಗಳ ಪ್ರಯತ್ನ ಈಗಿನವರಿಗೆ ಸಾಮಾನ್ಯವಾಗಿ ತೋರಬಹುದಾದರೂ, ಕಂಬಾರರು ಅದನ್ನು ಬಿಚ್ಚಿಡುವ
ರೀತಿ ಅನಾದೃಶ. ದೇವರೇಸಿ ಹೆಣವಾಗುವ ಮುನ್ನಿನ ಚಡಪಡಿಕೆಗಳು,
ಮನಸ್ಸಿನ ತಲ್ಲಣಗಳು ಒಂದು ವಿಲಕ್ಷಣ ಅನುಭೂತಿಯನ್ನು ತೆರೆದಿಡುತ್ತವೆ. ಕೊನೆಯಲ್ಲಿ ಕರಿಮಾಯಿಯ ಸಾನ್ನಿಧ್ಯದಲ್ಲೇ ಆಗುವ ಕೋಲಾಹಲಗಳಿಂದ
ಜರ್ಝರಿತರಾಗುವ ಗೌಡ, ದತ್ತಪ್ಪ, ಲಗುಮವ್ವ, ದೇವರೇಸಿ ಇವರ ಮನಸ್ಸಿನ ಹೊಯಿಕೆಗಳು ಹಳೆಯ ತಲೆಗಳ ತಲ್ಲಣವನ್ನು
ಹೊರಸೂಸುತ್ತವೆ. ಕೊನೆಯಲ್ಲಿ ಗುಡಸೀಕರನಿಗೆ ತನ್ನೊಬ್ಬನ ಅಧಿಕಾರದಾಹಕ್ಕಾಗಿ ಇಡೀ ಹಳ್ಳಿಯನ್ನು ಬಲಿಕೊಟ್ಟ
ಪಶ್ಚಾತ್ತಾಪ ಕಾಡುವುದು ಮನಸ್ಸಿನ ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಓದಿ ಮುಗಿಸಿದ ನಂತರ, ಇಡೀ ಕತೆ ಹಳತು-ಹೊಸತರ ನಡುವಿನ
ವಿಚಾರಗಳ ಸಂಘರ್ಷವೆನಿಸುತ್ತದೆ. ಎಷ್ಟೋ ಕತೆಗಳು ಬಂದಿರಬಹುದಾದರೂ, ಕಂಬಾರರ ಕರಿಮಾಯಿ ಓದಿರದ ವಿಚಾರವಂತ
ಮುಗ್ಧ ಮನಸ್ಸುಗಳ ಮತ್ತು ಓದಿ ಪ್ರಜ್ಞಾವಂತನೆನಿಸಿದ ವಿಚಾರಹೀನರ ಅಭಿಪ್ರಾಯಗಳ, ಛಲಗಳ ತಾಕಲಾಟವನ್ನು
ತೆರೆದಿಡುತ್ತದೆ. ಮರುಓದು ಅವಶ್ಯವೆನಿಸುವಷ್ಟು ಚೆನ್ನಾಗಿದೆ ಕರಿಮಾಯಿ. ಅಂದಹಾಗೆ, ಕರಿಮಾಯಿ ಕಾದಂಬರಿ ಸಿನಿಮಾ ಆಗಿದೆ.
Super
ReplyDelete